ಸಿದ್ದಗಂಗಾ ಮಠದ ದ್ವಾರದಲ್ಲಿ ಕಲ್ಪಶುದ್ಧಿ ಸ್ಯಾನಿಟೈಸ್ ಘಟಕ ಸ್ಥಾಪನೆ

Sanitizer

ಸಿದ್ದಗಂಗಾ ಮಠದ ದ್ವಾರದಲ್ಲಿ ಕಲ್ಪಶುದ್ಧಿ ಸ್ಯಾನಿಟೈಸ್ ಘಟಕ ಸ್ಥಾಪನೆ

ತುಮಕೂರು: ಕೊರೊನಾ ಮಹಾಮಾರಿಯಿಂದ ಪಾರಾಗುವ ಸಲುವಾಗಿ ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಸ್ಯಾನಿಟೈಜೇಶನ್, ಕಲ್ಪಶುದ್ಧಿ ಸ್ಯಾನಿಟರಿ ಘಟಕ (ಗೇಟ್ ವೇ)ವನ್ನು ಸ್ಥಾಪಿಸಲಾಗಿದೆ. 
ಈ ಕಲ್ಪಶುದ್ಧಿ ಸ್ಯಾನಿಟರ್ ಘಟವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಉದ್ಘಾಟಿಸಿದರು.
ಸಂಜೀವಿನಿ ರಕ್ತನಿಧಿ ಕೇಂದ್ರದ ಅರುಣ್‌ಕುಮಾರ್ ಕೊಡುಗೆಯಾಗಿ ನೀಡಿರುವ ಸ್ಯಾನಿಟೈಸ್ ಗೇಟ್ ವೇಯನ್ನು ಎಸ್‌ಐಟಿ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ ಚಿದಾನಂದ್ ಸ್ಥಾಪಿಸಿದ್ದು, ಮಠಕ್ಕೆ ಬರುವ ಭಕ್ತಾದಿಗಳಿಗೆ ಸ್ವಯಂ ಚಾಲಿತವಾಗಿ ಈ ಘಟಕದ ಉಪಕರಣ ಸ್ಯಾನಿಟೈಸ್ ಮಾಡಲಿದೆ. 
ಈ ಘಟಕ ಉದ್ಘಾಟಿಸಿದ ನಂತರ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕ್ಯಾತ್ಸಂದ್ರದಿಂದ ಶ್ರೀಮಠಕ್ಕೆ ಪ್ರವೇಶ ಪಡೆಯುವ ವಸ್ತುಪ್ರದರ್ಶನದ ಮುಂಭಾಗದ ಗೇಟ್ ಬಳಿ ಈ ಸ್ಯಾನಿಟೈಸ್ ಗೇಟ್ ವೇ ಸ್ಥಾಪಿಸಲಾಗಿದೆ. ಈ ಬೂತ್‌ನಲ್ಲಿನ ಉಪಕರಣ ಮನುಷ್ಯನಿಗೆ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಿದೆ. ಹೀಗಾಗಿ ಮಠಕ್ಕೆ ಬರುವ ಭಕ್ತರಿಗೆ ಪ್ರತ್ಯೇಕವಾಗಿ ಸ್ಯಾನಿಟೈಸ್ ಹಾಕುವ ಅವಶ್ಯಕತೆ ಇಲ್ಲ ಎಂದರು. 
ಮಠಕ್ಕೆ ಬರುವ ಭಕ್ತಾದಿಗಳಿಗೆ ಈ ಗೇಟ್‌ನಲ್ಲೆ ಥರ್ಮಲ್ ಸ್ಕ್ಯಾನಿಂಗ್ ಸಹ ಮಾಡಲಾಗುವುದು ಎಂದು ಅವರು ಹೇಳಿದರು.
ಶ್ರೀಮಠಕ್ಕೆ ಆಗಮಿಸುವ ಭಕ್ತರು ಕಡ್ಡಾಯಾಗಿ ಮಾಸ್ಕ್ ಧರಿಸಿರಬೇಕು. ಜತೆಗೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.  
ಸಂಜೀವಿನಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಎಸ್‌ಐಟಿ ಕಾಲೇಜಿನ ಬಯೋಟೆಕ್ನಾಲಜಿಯ ವಿದ್ಯಾರ್ಥಿ ಚಿದಾನಂದ್ ಮತ್ತು ಸ್ನೇಹಿತರು ಒಟ್ಟಾಗಿ ಸೇರಿ ಕೊರೊನಾ ಸಂದರ್ಭದಲ್ಲಿ ಈ ಘಟಕ ಸ್ಥಾಪನೆ ಮಾಡಿರುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು. 
ಪ್ರತಿಯೊಬ್ಬ ಇಂಜಿನಿಯರ್‌ಗಳು ಸಹ ಪ್ರಾಯೋಗಿಕವಾಗಿ ಆಲೋಚಿಸಿ ಸಮಸ್ಯೆ ಬಂದಾಗ ಸಮಾಜಕ್ಕೆ ಕೊಡುಗೆ ನೀಡುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಎಲ್ಲ ತಾಂತ್ರಿಕ ಹಿನ್ನೆಲೆಯುಳ್ಳವರಿಗೆ ಈ ಕಾರ್ಯ ಮಾದರಿಯಾಗಿದೆ ಎಂದರು.